ಬ್ರ್ಯೂಸಫ್, ವಾಲೇರಿ ಯಾಕವಲೆವಿಚ್

	 1833-1924. ರಷ್ಯದ ಕವಿ ಮತ್ತು ಕಥೆಗಾರ. ಪ್ರತೀಕ ಮಾರ್ಗದ ಪ್ರಾರಂಭದ ಘಟ್ಟಕ್ಕೆ ಸೇರಿದವ. ಹುಟ್ಟಿದ್ದು ಮಾಸ್ಕೋದಲ್ಲಿ. 1894ರಲ್ಲಿ ಈತ ಪ್ರಕಟಿಸಿದ ದಿ ರಷ್ಯನ್ ಸಿಂಬಲಿಸ್ಟ್ಸ್ (ಎರಡು ಭಾಗಗಳು) ಈತನನ್ನು ಪ್ರಸಿದ್ಧಿ ಶಿಖರಕ್ಕೊಯ್ದಿತು. ಇದರಲ್ಲಿ ಸ್ವಂತ ಕವನಗಳೇ ಅಲ್ಲದೆ ಫ್ರೆಂಚಿನಿಂದ ಅನುವಾದಿಸಿದವೂ ಇವೆ. ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಕೈ ಆಡಿಸಿದ್ದರೂ ಕಾವ್ಯ ಪ್ರತಿಕ್ರಿಯೆಯ ಸ್ವಾಮ್ಯ ಈತನಿಗೆ ಸಿದ್ಧಿಸಿತ್ತು. ಈತನ ಫಾಯರಿ ಏಂಜೆಲ್ (ಅಗ್ನಿ ದೇವತೆ 1908) ಅತ್ಯುತ್ತಮ ಕಾದಂಬರಿ.

	1914ರ ಒಂದನೆಯ ಮಾಹಾಯುದ್ಧದಲ್ಲಿ ಮಾಸ್ಕೊ ಸುದ್ದಿ ಪತ್ರಿಕೆಯ ಪತ್ರಿಕಾ ಪ್ರತಿನಿಧಿಯಾಗಿ ಕೆಲಸಮಾಡಿದ. ಸಾಯುವ ಮುನ್ನ ಪುಷ್ಕಿನ್ನನ ಬಗ್ಗೆ ಒಂದು ಮಹಾಗ್ರಂಥ ತರುವ ದೊಡ್ಡ ಯೋಜನೆ ಹಾಕಿಕೊಂಡು ಪುಷ್ಕಿನ್ನನ ಅಪೂರ್ಣ ಕೃತಿಗಳನ್ನು ಪೂರ್ಣ ಮಾಡುವ ಕೆಲಸದಲ್ಲಿ ತೊಡಗಿದ್ದ. ಈತನ ಪ್ರಭಾವ ತರುಣ ಬರಹಗಾರರ ಮೇಲೆ ಅಗಾಧವಾಗಿದೆ. 1917ರ ರಷ್ಯದ ಅಕ್ಟೋಬರ್ ಕ್ರಾಂತಿಯ ಅನಂತರ ಕಮ್ಯೂನಿಸ್ಟ್ ಪಾರ್ಟಿಯನ್ನು ಸೇರಿ ಸಾಯುವ ತನಕವೂ ಪಾರ್ಟಿಗಾಗಿ ದುಡಿದ. 	 (ಎಲ್.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ